History of panja panchalingeshwara temple
ಶ್ರೀ ಪರಿವಾರ ಪಂಚಲಿಂಗೇಶ್ವರ ಸ್ವಾಮಿ ದೇವಸ್ಥಾನ ಪಂಜ ಇದು ಅತೀ ಪುರಾತನ ದೇಗುಲವಾಗಿದ್ದು ತುಳುನಾಡ ಇತಿಹಾಸದಲ್ಲಿ ಅಂತರ್ಗತವಾದ ಬಲ್ಲಾಳ ಅರಸುಗಳ ಕಾಲದಿಂದಲೂ ಸೀಮಾ ವ್ಯಾಪ್ತಿಯ ಧಾಮರ್ಿಕ ಕೇಂದ್ರವಾಗಿ ಆರಾಧಿಸಲ್ಪಡುತ್ತಿದೆ. ದೇಗುಲಗಳ ಅಸ್ತಿತ್ವ, ಆಸ್ತಿಕ ಮಹಾಶಯರ ನಂಬಿಕೆಗಳೊಂದಿಗೆ ಬೆಸೆಯಲ್ಪಟ್ಟಿದ್ದು ಐತಿಹಾಸಿಕ ಸತ್ಯಕ್ಕಿಂತಲೂ ಜನಮಾನಸದಲ್ಲಿ ನೆಲೆ ನಿಂತ ಮೂಲ ನಂಬಿಕೆಗಳಿಂದಲೇ ಕ್ಷೇತ್ರದ ಸಾನಿಧ್ಯ ವೃದ್ಧಿಯಾಗುತ್ತಿದೆ ರೂಢವಾದ ನಂಬಿಕಗಳ ಆಧಾರದಲ್ಲಿ ಈ ಕ್ಷೇತ್ರ ಪುರಾತನ ಋಷಿಗಳ ತಪಃ ಪ್ರಭಾವದಿಂದ ಸ್ಥಾಪಿಸಲ್ಪಟ್ಟಿದೆ. ದೈತ್ಯವನದಲ್ಲಿ ವಾನಪ್ರಸ್ತರಾಗಿದ್ದ ಪಾಂಡವರ ನಂಟು ಈ ದೇಗುಲಕ್ಕಿದೆ. ಭಕ್ತ ಜನ ಮಾನಸದಲ್ಲಿ ಇಂದಿಗೂ ನೆಲೆಯಾಗುಳ್ಳ ಮತ್ತು ಇದಕ್ಕೆ ಸಾಕ್ಷಿ ಭೂತವಾಗಿ ಲಭ್ಯ ಕುರುಹುಗಳ ಹಿನ್ನೆಲೆಯಲ್ಲಿ ಚಿಂತಿಸಿದಾಗ, ಪ್ರಭು ಪಂಚಲಿಂಗೇಶ್ವರನನ್ನು ಈ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲಾಗಿರುತ್ತದೆ. ಈ ಕ್ಷೇತ್ರದಿಂದ ಸಾಧಾರಣ 4 ಕಿ.ಮಿ ದೂರದ ಬಂಟಮಲೆ ಎಂಬಲ್ಲಿ ಸದಾಶಿವ ದೇವರು ಲಿಂಗರೂಪಿಯಾಗಿ ಆರಾಧಿಸಲ್ಪಡುತ್ತಿದ್ದು ಪ್ರಕೃತ ಆ ಸ್ಥಳದಲ್ಲಿ ಕೆರೆಯ ಹಾಗೂ ಗುಡಿಯ ಅವಶೇಶಿಕ ಗುರುತುಗಳು ಲಭ್ಯವಿರುತ್ತದೆ. ಆ ಸ್ಥಳದಿಂದ ಈ ಕ್ಷೇತ್ರದ ಜಾತ್ರ ಸಂದರ್ಭದಲ್ಲಿ ಅಲ್ಲಿರುವ ಕೆರೆಯಿಂದ ನೀರನ್ನು ತಂದು ಪ್ರಭುವಿಗೆ ಅಭಿಷೇಕ ಮಾಡುವ ಸಂಪ್ರದಾಯ ನಡೆಯುತ್ತಿದೆ. ಗತಕಾಲದಲ್ಲಿ ಅರ್ಚಕರು ಬಂಟಮಲೆಯ ಮೂಲ ಸ್ಥಳದಲ್ಲಿ ಅರ್ಚನೆಗಾಗಿ ಕಠಿಣವಾದ ಬೆಟ್ಟದ ದಾರಿಯಲ್ಲಿ ಸಾಗಬೇಕಾಗಿದ್ದು ಅವರ ನಿತ್ಯ ಪ್ರಾರ್ಥನೆಯಿಂದ ಪರವಶನಾದ ಸ್ವಾಮಿ ಪಂಚಲಿಂಗೇಶ್ವರ ಸ್ವಾಮಿಯ ಗುಡಿಯ ಮುಂದುಗಡೆಯ ನಂದಿ ಇರುವ ಸ್ಥಾನದಲ್ಲಿ ಸ್ವಯಂಭೂತವಾಗಿ ಉದ್ಭವವಾದನೆಂದು ತದನಂತರ ಈ ದೇಗುಲವು ಪರಿವಾರ ಸದಾಶಿವ ಪಂಚಲಿಂಗೇಶ್ವರ ದೇಗುಲವೆಂದು ಪ್ರಸಿದ್ದವಾಯಿತೆಂದು ನಂಬಿಕೆ ಇದೆ. ದೇಗುಲವು ಗಜ ಪೃಷ್ಠ ಆಯದಲ್ಲಿ ರಚನೆಗೊಂಡಿರುತ್ತದೆ. ಬಲ್ಲಾಳ ಅರಸುಗಳ ಅಳ್ವಿಕೆಯ ಅನಂತರದಲ್ಲಿ ದೇಗುಲವು ಪಾಳು ಬಿದ್ದು ನಿತ್ಯ ನೈಮಿತ್ತಕ ಪೂಜಾ ಕೈಂಕರ್ಯಗಳೂ ಅತಿ ಕಷ್ಟದಿಂದ ನಡೆಯುತ್ತಿತ್ತು. ದೇವಾಲಯಕ್ಕೆ ಸಂಬಂದಿಸಿದ ಭೂಮಿಯು ಒಕ್ಕಲು ಮಸೂದೆ ಕಾನೂನಿನ ಹಿನ್ನೆಲೆಯಲ್ಲಿ ಉಳುವವನ ವಶವಾಯಿತು. ದಕ್ಷಿಣ ಕನ್ನಡ/ತುಳುನಾಡ ವ್ಯಾಪ್ತಿಯಲ್ಲಿ ಸೀಮಾ ದೇಗುಲಗಳೆಂದು ಬಲ್ಲಾಳ ಅರಸುಗಳ ಕಾಲದಲ್ಲೆ ಗುರುತಿಸಿ ಗೌರವಿಸಲ್ಪಟ್ಟ ದೇಗುಲಗಳಲ್ಲಿ ಪುತ್ತೂರು ಹಾಗೂ ಸುಳ್ಯ ತಾಲೂಕುಗಳಲ್ಲಿನ 57 ಗ್ರಾಮಗಳ ವಿಶಾಲ ವ್ಯಾಪ್ತಿಯನ್ನು ಹೊಂದಿರುವ ಈ ದೇಗುಲವು ವಿಶೇಷ ಮನ್ನಣೆಗೆ ಪಾತ್ರವಾಗಿದೆ ಅಂದಿನ ರಾಜಾಡಳಿತ ಕಾಲದಲ್ಲಿ ದೇಗುಲಗಳ ಪಾವಿತ್ರ್ಯತೆ ಹಾಗೂ ವ್ಯವಸ್ಥೆಗಳ ಹಿನ್ನೆಲೆಯಲ್ಲಿ ದೇಗುಲಗಳನ್ನು ಗ್ರಾಮ ದೇಗುಲ/ಮಾಗಣೆ ದೇಗುಲ ಹಾಗೂ ಸೀಮಾ ದೇಗುಲಗಳೆಂದು ಗುರುತಿಸಿ ಈ ದೇಗುಲಗಳಿಗೆ ರಾಜ ಮನ್ನಣೆ ಉಂಬಳಿಗಳನ್ನು ಕೊಡಲಾಗುತ್ತಿತ್ತು. ತುಳುನಾಡ ವ್ಯಾಪ್ತಿಯಲ್ಲಿನ ಕುಂಬ್ಲೆ ಸೀಮೆಯನ್ನು 3 ಸಾವಿರ ಸೀಮೆಯೆಂದೂ, ವಿಟ್ಲ ಸೀಮೆಯನ್ನು 2 ಸಾವಿರ ಸೀಮೆಯೆಂದು, ಪಂಜವನ್ನು ಪಂಜ ಸಾವಿರ ಸೀಮೆಯೆಂದೂ ಉಲ್ಲೇಖಿಸಲಾಗಿದೆ . ಪಂಜ ಸೀಮೆಯ ಪೂರ್ವದ ಕೊಲ್ಲಮೊಗ್ರ ಸುಬ್ರಹ್ಮಣ್ಯ, ದಕ್ಷಿಣದ ಗುತ್ತಿಗಾರು, ಅಮರಮುಡ್ನೂರು, ಪಶ್ಚಿಮದ ಮಾಡಾವು ಸವಣೂರು ಹಾಗೂ ಉತ್ತರಕ್ಕೆ ನೇರೆಂಕಿ, ಕೊಂಬಾರು, ಕಡಬ, ನೂಜಿಬಾಳ್ತಿಲ, ಹಳೇನೇರೆಂಕಿಗಳ ತನಕದ ವ್ಯಾಪ್ತಿಯಲ್ಲಿ ವಿಸ್ತರಿಸಲ್ಪಟ್ಟಿದೆ. ಸೀಮಾ ವ್ಯಾಪ್ತಿಯ ಪುರಾತನ ಐತಿಹ್ಯಗಳನ್ನೊಳಗೊಂಡ ಕೊಂಬಾರು, ಕುಂತೂರು, ನೂಜಿಬಾಳ್ತಿಲ, ಬರೆಪ್ಪಾಡಿ, ಎಡಮಂಗಲ, ಐವನರ್ಾಡುಗಳಲ್ಲಿ ಶಿವದೇಗುಲಗಳು ಸ್ಥಾಪಿಸಲ್ಪಟ್ಟು ಪೂಜಿಸಲ್ಪಡುತ್ತಿದೆ. ಐತಿಹಾಸಿಕವಾಗಿ ಅವಲೋಕಿಸಿದಾಗ ಈ ದೇಗುಲವು ಹಿಂದೆ ಬಲ್ಲಾಳ ಅರಸು ಮನೆತನದ ಆಡಳಿತಕ್ಕೆ ಒಳಪಟ್ಟಿದ್ದು ಪಂಜ ಬೀಡಿನ ಅರಸು ಮನೆತನಕ್ಕೆ ದೇಗುಲದ ಉತ್ಸವ ಕಾಲಗಳಲ್ಲಿ ವಿಶೇಷ ಮನ್ನಣೆಯೊಂದಿಗೆ ಗೌರವಿಸಲ್ಪಡುವ ಸತ ಸಂಪ್ರದಾಯವು ವರ್ತಮಾನ ಕಾಲದಲ್ಲೂ ರೂಡಿಯಲ್ಲಿದೆ. ಈ ದೇಗುಲದ ಜಾತ್ಯಾತೀತ ಸಂಪ್ರದಾಯಕ್ಕೆ ಮತ್ತೊಂದು ಅಪೂರ್ವ ನಿದರ್ಶನ ಇಂತಿದೆ ಹಿಂದೆ ಪಂಜ ಮಾಗಣೆ ವ್ಯಾಪ್ತಿಯ ಎಣ್ಮೂರು ಬೀಡಿನ ಬಲ್ಲಾಳರು ಮತ್ತು ಎಣ್ಮೂರು ಕಟ್ಟ ಬೀಡಿನ ಯುವ ಬಲ್ಲಾಳರಿಗೆ, ಅಧಿಕಾರಕ್ಕಾಗಿ ನಡೆದ ಕಲಹದಲ್ಲಿ ಪಿಲಿಕುಂಞ ಎಂಬ ಯುವ ಮುಸ್ಲಿಂ ಯೋಧನು ಎಣ್ಮೂರು ಬೀಡಿನ ಬಲ್ಲಾಳರ ಪರ ನಿಂತು ಕಟ್ಟಬೀಡಿನ ಯುವ ಅರಸನನ್ನು ಸೋಲಿಸಿ ಪಟ್ಟದ ಕತ್ತಿ ಕಿರೀಟಗಳನ್ನು ಎಣ್ಮೂರು ಬಲ್ಲಾಳರಿಗೆ ನಿಷ್ಠೆಯಿಂದ ಒಪ್ಪಿಸಿದನು.
ಈತನ ರಾಜ ಭಕ್ತಿಗೆ ಮೆಚ್ಚಿದ ಅರಸನು ತನ್ನ ನಂತರ ಕಟ್ಟಬೀಡಿಗೆ ಸಂಬಂದಿಸಿದ ತನ್ನ ಆಸ್ತಿಯು ಈ ಮುಸ್ಲಿಂ ಯೋಧ ಪಿಲಿಕುಂಞಗೆ ಸಲ್ಲತಕ್ಕದ್ದೆಂದು ಶಾಶನ ಮಾಡಿದನು. ಕಾಲಾನಂತರ ಈ ಮುಸ್ಲಿಂ ಮನೆತನದವನ ರಾಜ ಭಕ್ತಿ-ದೇವಭಕ್ತಿಯ ಪ್ರತೀಕವಾಗಿ ಇಂದಿಗೂ ಈ ದೇಗುಲದ ಜಾತ್ರ ಉತ್ಸವದ ರಥೋತ್ಸವದಂದು ಈ ಮನೆತನದ ಮುಸ್ಲಿಂ ಬಂಧುಗಳನ್ನು ಕತ್ತಿ, ಗುರಾಣಿಗಳ ಗೌರವ ರಕ್ಷಣೆಯೊಂದಿಗೆ ರಥಬೀದಿ ಕಟ್ಟೆಯಿಂದ ದೇಗುಲಕ್ಕೆ ಕರೆತರಲಾಗುತ್ತಿದೆ ಈ ಸಂಪ್ರದಾಯ ಹಿಂದೂ ಮುಸ್ಲಿಂ ಸಹಮತದ ಧ್ಯೋತಕವಾಗಿದ್ದು ರಾಜ್ಯಕ್ಕೆ ಆದರ್ಶವೆನಿಸಿದ ಪರಂಪರೆಯಾಗಿದೆ. ದೇವಾಲಯದ ಅಭಿವೃದ್ಧಿ ಕಾರ್ಯಗಳು ಅಂದಾಜು 130 ವರ್ಷಗಳ ಹಿಂದಿನಿಂದ ಪ್ರಾರಂಭಗೊಂಡಿದ್ದು, ಸುತ್ತಲಿನ ಪೌಳಿ, ಹಾಗೂ ದಕ್ಷಿಣದ ಪಂಚಲಿಂಗೇಶ್ವರ ಸಭಾಭವನ, ಪಶ್ಚಿಮದ ಭೋಜನ ಶಾಲೆ, ಪಾಕಶಾಲೆಗಳು, ಉತ್ತರದ ಪಾರ್ವತಿ ಸಭಾಭವನ ಕಟ್ಟಡಗಳು ಹಂತ ಹಂತವಾಗಿ ರಚನೆಗೊಂಡಿರುತ್ತದೆ. 2008ರಲ್ಲಿ ಶ್ರೀ ಸಂಪುಟ ನರಸಿಂಹಸ್ವಾಮಿ ಮಠ ಕುಕ್ಕೆ ಸುಬ್ರಹ್ಮಣ್ಯ ಇದರ ಮಠಾಧೀಶರು ಗೌರವಾಧ್ಯಕ್ಷ ಹಾಗೂ ಡಾ. ಎ.ಲೀಲಾವತಿಯವರು ಅಧ್ಯಕ್ಷರಾಗಿರುವ ಅಭಿವೃದ್ಧಿ ಸಮಿತಿಯ ಮುಂದಾಳುತ್ವದಲ್ಲಿ ಊರ-ಪರವೂರ ಭಕ್ತವೃಂದದ ಸಹಕಾರ, ಸಹಯೋಗ, ಸರಕಾರ, ಸಂಘ ಸಂಸ್ಥೆಗಳ ಆಥರ್ಿಕ ಸಹಕಾರದೊಂದಿಗೆ ಅಂದಾಜು 4 ಕೋಟಿ ರೂ.ಗಳ ವೆಚ್ಚದಲ್ಲಿ ಗರ್ಭಗುಡಿಗಳ ಹಾಗೂ ರಾಜಾ ಗೋಪುರದ ನಿಮರ್ಾಣ ಕಾರ್ಯಗಳು ಸುಂದರವಾದ ಶಿಲ್ಪ / ಕಾಷ್ಟ ಶಿಲ್ಪಗಳ ಭವ್ಯತೆಯೊಂದಿಗೆ 2011ರಲ್ಲಿ ಪೂರ್ಣಗೊಂಡು 2012 ಜನವರಿ 29ರಂದು ಪುನಃ ಪ್ರತಿ ಸ್ಥಾಪನೆ ಪೆಬ್ರವರಿ ದಿನಾಂಕ 1 ರಂದು ಬ್ರಹ್ಮಕಲಶಾಭಿಷೇಕ ಹಾಗೂ ನಾಗಮಂಡಲ ಸೇವೆಯೊಂದಿಗೆ ಸಂಪನ್ನ ಗೊಂಡಿರುತ್ತದೆ. ದೇಗುಲದ ಪೂರ್ವಕ್ಕೆ, ಪಶ್ಚಿಮಕ್ಕೆ, ಉತ್ತರಕ್ಕೆ ಕಣ್ಮನ ತಣಿಸುವ ತೆಂಗು, ಅಡಕೆ ತೋಟಗಳಿದ್ದು, ದಕ್ಷಿಣಕ್ಕೆ ಉದ್ದಕ್ಕೂ ಚಾಚಿ ನಿತ್ಯಹರಿದ್ವರ್ಣದಿಂದ ರಮಣೀಯವಾಗಿ-ಭವ್ಯವಾಗಿ-ಹಸಿರುಡುಗೆಯನ್ನು ತೊಟ್ಟು ತಂಪಿನ-ಕಂಪಿನ ಆಸರೆಯನ್ನು ಸುತ್ತಲಿನ ಪರಿಸರಕ್ಕೆ ಬೀರುವ ಬಂಟಮಲೆ ಅರಣ್ಯ ರಮಣೀಯತೆಯೊಂದಿಗೆ ಭಾವಪರವಶತೆಯ ತೆರೆಯನ್ನು ಕಣ್ಮನಗಳಲಿ ತುಂಬುತ್ತದೆ. ದೇಗುಲವು ಅಂದಾಜು 25 ಎಕ್ರೆಗಳ ವಿಶಾಲ ಪ್ರದೇಶವನ್ನು ಹೊಂದಿದ್ದು, ಪೂರ್ವದ ರಾಜಾಗೋಪುರ, ಉತ್ತರದ ಪಾರ್ವತಿ ಸಭಾಭವನ, ದಕ್ಷಿಣದ ಪಂಚಲಿಂಗೇಶ್ವರ ಸಭಾಭವನ, ಪಶ್ಚಿಮದಲ್ಲಿನ ಸುಸಜ್ಜಿತ ಭೋಜನ ಶಾಲೆ, ಪಾಕಶಾಲೆಗಳು ತಾಲೂಕು, ಜಿಲ್ಲಾಮಟ್ಟದ ಸಾಂಸ್ಕೃತಿಕ, ಧಾಮರ್ಿಕ ಕಾರ್ಯಕ್ರಮಗಳಿಗೆ ವೇದಿಕೆಯಾಗಿದ್ದು, ಊರ ಪರವೂರ ಬಂಧುಗಳ ಮದುವೆ ಇತ್ಯಾದಿ ಸಮಾರಂಭಗಳಿಗೆ ವ್ಯವಸ್ಥಿತ ಅವಕಾಶವನ್ನು ಕಲ್ಪಿಸುತ್ತಿದೆ. ದೇಗುಲದ ಉತ್ತರ, ಪಶ್ಚಿಮ ಭಾಗದಲ್ಲೂ ದೇಗುಲದ್ದೆ ಆದ ಕಲ್ಪವೃಕ್ಷದ ತೋಟ ಪರಿಸರಕ್ಕೆ ತಂಪನ್ನೂ, ದೇಗುಲಕ್ಕೆ ಆದಾಯವನ್ನು ಒದಗಿಸುತ್ತಿದೆ. 2012ರಲ್ಲಿ ನಡೆದ ಬ್ರಹ್ಮಕಲಶೋತ್ಸವದ ನಂತರ ದೇಗುಲದಲ್ಲಿ ನಿತ್ಯ ಅನ್ನಸಂತರ್ಪಣೆ ನಡೆಯುತ್ತಿದ್ದು, ಕ್ಷೇತ್ರದ ಸಾನಿಧ್ಯ ವೃದ್ಧಿಗೆ ಪೂರಕವಾಗಿ ಆಗಮಿಸುವ ಭಕ್ತರ ತನುವಿಗೆ ತೃಪ್ತಿಯನ್ನು ಒದಗಿಸುತ್ತಿದೆ. ದೇಗುಲದ ಪಶ್ಚಿಮ ಭಾಗದಲ್ಲಿ ತುಳುನಾಡಿನ ಆರಾಧ್ಯ ದೈವಗಳಾದ ಇತಿಹಾಸ ಪ್ರಸಿದ್ದ ಪವಾಡ ಪುರುಷರೆಂದು ಆರಾಧಿಸಲ್ಪಡುವ ಕೋಟಿ ಚೆನ್ನಯ್ಯರ ಗರಡಿಗಳಿದ್ದು ಜಾತ್ರೆಯ ನಂತರದ ಹುಣ್ಣಿಮೆಯಂದು ವೈಭವದ ನೇಮೋತ್ಸವವು ನಡೆಯುತ್ತಿದೆ. ಇಲ್ಲೆ ಹತ್ತಿರದಲ್ಲಿ ನಾಗನ ಕಟ್ಟೆಯಿದ್ದು ಈ ಸ್ಥಳದಲ್ಲಿ ನಾಗನ ಆರಾಧನೆ ಕೈಂಕರ್ಯಗಳು ನಡೆಯುತ್ತಿರುತ್ತದೆ. ದೇಗುಲಕ್ಕೆ ಸಂಬಂಧಿಸಿದ ಕಾಣರ್ಿಕದ ದೈವಗಳಾದ ಕಾಜುಕುಜುಂಬ, ಶಿರಾಡಿ ದೈವಗಳ ಮೂಲ ಸ್ಥಾನವು ದೇಗುಲದಿಂದ ಸುಮಾರು 1 ಕಿ.ಮೀ ದೂರದ ಪಂಜದ ಬೈಲು ಎಂಬಲ್ಲಿದ್ದು ದೈವಗಳಿಗೆ ಗುಡಿ-ಮಾಡುಗಳನ್ನು ಇನ್ನಷ್ಟೆ ಮಾಡಬೇಕಾಗಿದೆ. ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲವು ಪಂಜ ಪೇಟೆಯಿಂದ 1 ಕಿ.ಮೀ ದೂರದಲ್ಲಿದ್ದು, ಪುತ್ತೂರಿನಿಂದ ಸುಬ್ರಹ್ಮಣ್ಯ ಕಡೆಗೆ 40 ಕಿ.ಮೀ, ಸುಳ್ಯದಿಂದ 30 ಕಿ.ಮೀ ಹಾಗೂ ಸುಬ್ರಹ್ಮಣ್ಯದಿಂದ ಪುತ್ತೂರಿನ ಕಡೆಗೆ 20 ಕಿ.ಮೀ ದೂರದಲ್ಲಿ ರಾಜ್ಯ ಹೆದ್ದಾರಿ ನಂ. 100ರ ಸನಿಹದಲ್ಲಿದೆ. ನೂತನ ಧ್ವಜ ಸ್ತಂಭದ ಸ್ಥಾಪನೆ, ದೇವರಿಗೆ ಉತ್ಸವ ಕಟ್ಟೆಗಳ ನಿಮರ್ಾಣ, ದೇಗುಲದ ಬೆಟ್ಟಕ್ಕೆ ಹತ್ತುವ ಮೆಟ್ಟಿಲುಗಳ ನಿಮರ್ಾಣ, ದೈವಗಳ ಭಂಡಾರಮನೆ, ಮೂಡಗಳ ನಿಮರ್ಾಣ ಹೀಗೆ ಇನ್ನೂ ಹತ್ತಾರು ಅವಶ್ಯಕ ನಿಮರ್ಾಣಗಳಿಗೆ ಅಂದಾಜು 1 ಕೋಟಿಯಷ್ಟು ರೂಪಾಯಿ ಅವಶ್ಯಕತೆಯಿದ್ದು, ದೇಗುಲದ ಆಡಳಿತ/ಅಭಿವೃದ್ಧಿ ಸಮಿತಿಗಳು ಈ ಬಗ್ಗೆ ಕಾಲಮಿತಿ ಯೋಜನೆಗಳನ್ನು ರೂಪಿಸುತ್ತಿದ್ದು ಭಕ್ತವೃಂದದ ಸಹಕಾರಕ್ಕಾಗಿ ನಿರೀಕ್ಷೆಯಲ್ಲಿದೆ.

Comments
Post a Comment